ಗ್ರಂಥ ಪರಿಚಯ - `ಶ್ರಾದ್ಧ (ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ)`

‘ಶ್ರಾದ್ಧ’ ಎಂದು ಹೇಳಿದೊಡನೆ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ ‘ಅಶಾಸ್ತ್ರೀಯ ಮತ್ತು ಅವಾಸ್ತವ ಕರ್ಮಕಾಂಡದ ಆಡಂಬರ’ ಎಂಬ ತಪ್ಪುಕಲ್ಪನೆಯು ಮೂಡುತ್ತದೆ. ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಧರ್ಮದ್ರೋಹಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮವಾಗಿದೆ. ಶ್ರಾದ್ಧದ ವಿಷಯದಲ್ಲಿ ಮುಂದಿನ ವಿಚಾರಸರಣಿಯು ಸಮಾಜದಲ್ಲಿ ಕಂಡುಬರುತ್ತದೆ. ಪೂಜೆ ಅರ್ಚನೆ, ಶ್ರಾದ್ಧಪಕ್ಷ ಮುಂತಾದವುಗಳ ಮೇಲೆ ವಿಶ್ವಾಸವನ್ನಿಡದ ಅಥವಾ ಸಮಾಜಕಾರ್ಯವೇ ಸರ್ವ ಶ್ರೇಷ್ಠವಾಗಿದೆ ಎಂದು ಹೇಳುವವರು ಪಿತೃಗಳಿಗಾಗಿ ಶ್ರಾದ್ಧವಿಧಿಗಳನ್ನು ಮಾಡದೇ ಅದರ ಬದಲು, ‘ಬಡವರಿಗೆ ಅನ್ನದಾನ ಮಾಡುವೆವು ಅಥವಾ ಶಾಲೆಗಳಿಗೆ ಸಹಾಯ ಮಾಡುವೆವು’ ಎಂದು ಹೇಳುತ್ತಾರೆ ! ಅನೇಕ ಜನರು ಇದೇ ರೀತಿ ಮಾಡುತ್ತಾರೆ ! ಹೀಗೆ ಮಾಡುವುದೆಂದರೆ, ‘ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡದೇ, ಅದರ ಬದಲು ನಾವು ಬಡವರಿಗೆ ಅನ್ನದಾನ ಮಾಡುವೆವು, ಶಾಲೆಗೆ ಸಹಾಯ ಮಾಡುವೆವು’ ಎಂದು ಹೇಳಿದಂತೆಯೇ ಆಗಿದೆ. ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ ಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ. ಹಾಗಾಗಿ ಮೇಲಿನ ಹೇಳಿಕೆಗಳು ಹಾಸ್ಯಾಸ್ಪದವೆನಿಸಿಕೊಳ್ಳುತ್ತವೆ. ಮೇಲಿನಂತಹ ವಿಚಾರಸರಣಿಯಿರುವ ವ್ಯಕ್ತಿಗಳ ಕಣ್ಣಮುಂದಿರುವ ಅಜ್ಞಾನ ಮತ್ತು ಅಂಧವಿಶ್ವಾಸಗಳ ಪರದೆಯನ್ನು ದೂರ ಸರಿಸಿ, ಅವರಿಗೆ ‘ಶ್ರಾದ್ಧ’ವು ಹಿಂದೂ ಧರ್ಮದ ಪವಿತ್ರ ಸಂಸ್ಕಾರವಾಗಿದೆ ಎಂಬ ಸಕಾರಾತ್ಮಕ ಮತ್ತು ಅಧ್ಯಾತ್ಮಶಾಸ್ತ್ರೀಯ ದೃಷ್ಟಿಯು ಲಭಿಸಲಿ ಎಂಬ ಮುಖ್ಯ ಉದ್ದೇಶವನ್ನಿಟ್ಟು ಕೊಂಡು ಈ ಗ್ರಂಥವನ್ನು ಪ್ರಕಾಶಿಸಲಾಗಿದೆ. ಮುಂದೆ ಓದಿ...

ಭಾರತೀಯ ಸಂಸ್ಕೃತಿಯು ಏನು ಹೇಳುತ್ತದೆಂದರೆ, ಹೇಗೆ ತಂದೆ-ತಾಯಿ ಹಾಗೂ ಸಂಬಂಧಿಕರ ಅಸಹಾಯಕ ಸ್ಥಿತಿಯಲ್ಲಿ ಅವರ ಸೇವೆ-ಶುಶ್ರೂಷೆಗಳನ್ನು ನಾವು ಧರ್ಮಪಾಲನೆ ಎಂದೇ ಮಾಡುತ್ತೇವೆಯೋ, ಅದೇ ರೀತಿ ಮೃತ್ಯುವಿನ ನಂತರವೂ ಅವರ ಬಗ್ಗೆ ನಮಗೆ ಕೆಲವೊಂದು ಕರ್ತವ್ಯಗಳಿರುತ್ತವೆ. ಆ ಕರ್ತವ್ಯಪೂರ್ತಿಯ ಮತ್ತು ಅದರ ಮೂಲಕ ಪಿತೃಋಣ ವನ್ನು ತೀರಿಸುವ ಸದವಕಾಶವು ಶ್ರಾದ್ಧಕರ್ಮದಿಂದ ಸಿಗುತ್ತದೆ. ಚಿಕ್ಕಂದಿನಲ್ಲಿ ಅಂಗೈಯಲ್ಲಿಟ್ಟು ಮುದ್ದಿನಿಂದ ನಮ್ಮನ್ನು ಜೋಪಾಸನೆ ಮಾಡಿದ ಮಾತಾಪಿತರ ಮೃತ್ಯೋತ್ತರ ಪ್ರವಾಸವು ಸುಖಮಯ ಮತ್ತು ಕ್ಲೇಶರಹಿತವಾಗಬೇಕು, ಅವರಿಗೆ ಸದ್ಗತಿ ಸಿಗಬೇಕು ಎಂಬುದಕ್ಕಾಗಿ ಶ್ರಾದ್ಧವಿಧಿಯು ಅವಶ್ಯವಾಗಿರುತ್ತದೆ. ಶ್ರಾದ್ಧ ಮಾಡದೇ ಇದ್ದಲ್ಲಿ ಪಿತೃಗಳ ಇಚ್ಛೆಗಳು ಅತೃಪ್ತವಾಗಿ ಉಳಿಯುವುದರಿಂದ, ಹಾಗೆಯೇ ಇಂತಹ ವಾಸನಾಯುಕ್ತ ಪಿತೃಗಳು ಕೆಟ್ಟ ಶಕ್ತಿಗಳ ಹಿಡಿತಕ್ಕೆ ಸಿಲುಕಿ ಅವರ ಗುಲಾಮರಾಗುವುದರಿಂದ ಕೆಟ್ಟ ಶಕ್ತಿಗಳು ಪಿತೃಗಳನ್ನು ಉಪಯೋಗಿಸಿ ಕುಟುಂಬದವರಿಗೆ ತೊಂದರೆ ನೀಡುವ ಸಾಧ್ಯತೆಯು ಹೆಚ್ಚು ಇರುತ್ತದೆ. ಶ್ರಾದ್ಧವಿಧಿಯಿಂದಾಗಿ ಪಿತೃಗಳು ಈ ತೊಂದರೆಗಳಿಂದ ಮುಕ್ತಿ ಹೊಂದಿದಾಗ ನಮ್ಮ ಜೀವನವೂ ಸುಖಮಯವಾಗುತ್ತದೆ. ವಿಶಿಷ್ಟ ವಾರ, ತಿಥಿ, ನಕ್ಷತ್ರಗಳಲ್ಲಿ ಶ್ರಾದ್ಧ ಮಾಡುವುದರಿಂದ ಪಿತೃಕರ್ಮ ಆಗುವುದರ ಜೊತೆಗೆ ವಿಶಿಷ್ಟ ಫಲಪ್ರಾಪ್ತಿಯೂ ಆಗುತ್ತದೆ. ಇಂತಹ ವಿಭಿನ್ನ ದೃಷ್ಟಿಕೋನಗಳ ಮೂಲಕ ಶ್ರಾದ್ಧದ ಮಹತ್ವ ಮತ್ತು ಲಾಭಗಳನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ.


ಇದರೊಂದಿಗೆ ನಾಂದಿ, ಮಹಾಲಯ, ಭರಣಿ, ತ್ರಿಪಿಂಡಿ ಮುಂತಾದ ಶ್ರಾದ್ಧಗಳ ವಿವಿಧ ಪ್ರಕಾರಗಳು, ಶ್ರಾದ್ಧವನ್ನು ಯಾರು ಮಾಡಬೇಕು, ಶ್ರಾದ್ಧವನ್ನು ಯಾವಾಗ ಮತ್ತು ಎಲ್ಲಿ ಮಾಡಬೇಕು, ಶ್ರಾದ್ಧಕ್ಕಾಗಿ ಯೋಗ್ಯ ಬ್ರಾಹ್ಮಣರು ಸಿಗದೇ ಇದ್ದಲ್ಲಿ ಏನು ಮಾಡಬೇಕು, ಶ್ರಾದ್ಧದ ಅಡುಗೆಯಲ್ಲಿರಬೇಕಾದ ಆವಶ್ಯಕವಾದ ಪದಾರ್ಥಗಳು ಯಾವುವು, ಶ್ರಾದ್ಧಕರ್ತಾ ಮತ್ತು ಶ್ರಾದ್ಧಭೋಕ್ತಾ ಇವರಿಗಿರುವ ವಿಧಿನಿಷೇಧಗಳೇನು, ಶ್ರಾದ್ಧ ಪ್ರಯೋಗ ಹೇಗಿರುತ್ತದೆ, ಪಿತೃಗಳಿಗೆ ಮತ್ತು ದೇವರಿಗೆ ಅನ್ನ ನಿವೇದನೆ ಮಾಡುವ ಪದ್ಧತಿ ಯಾವುದು, ಶ್ರಾದ್ಧ ಮಾಡುವಲ್ಲಿ ಅಡಚಣೆ ಬಂದರೆ ಅದನ್ನು ಹೇಗೆ ದೂರಗೊಳಿಸುವುದು ಮುಂತಾದ ಉಪಯುಕ್ತ ಮಾಹಿತಿಯನ್ನೂ ಈ ಗ್ರಂಥದಲ್ಲಿ ನೀಡಲಾಗಿದೆ. ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ನೀಡಿದ ಅನ್ನವು ಪಿತೃಗಳಿಗೆ ಹೇಗೆ ತಲುಪುತ್ತದೆ, ಕಾಗೆಯು ಪಿಂಡವನ್ನು ಮುಟ್ಟುವುದರ ಹಿಂದಿನ ಶಾಸ್ತ್ರವೇನು ಮುಂತಾದ ಸರ್ವಸಾಮಾನ್ಯರನ್ನು ಕಾಡುವ ಸಂದೇಹಗಳ ನಿವಾರಣೆಯನ್ನು ಈ ಗ್ರಂಥದಲ್ಲಿ ಮಾಡಲಾಗಿದೆ.

ಈ ಗ್ರಂಥದ ಅಧ್ಯಯನದಿಂದ ನಮ್ಮ ಮಹಾನ್ ಋಷಿಮುನಿಗಳು ನೀಡಿದ ‘ಶ್ರಾದ್ಧ’ರೂಪಿ ಅಮೂಲ್ಯ ಸಂಸ್ಕೃತಿಯ ಪರಂಪರೆಯನ್ನು ಜೋಪಾಸನೆ ಮಾಡುವ ಸದ್ಬುದ್ಧಿಯು ಎಲ್ಲರಿಗೂ ಲಭಿಸಲಿ, ಅದೇ ರೀತಿ ಶ್ರಾದ್ಧವಿಧಿಗಳನ್ನು ಶ್ರದ್ಧೆಯಿಂದ ಮಾಡುವಂತಾಗಿ ನಮ್ಮ ಪೂರ್ವಜರ ಹಾಗೂ ಸ್ವಂತದ ಉನ್ನತಿಯು ಆಗಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

1 comment:

Note: only a member of this blog may post a comment.